ದಸರಯ್ಯ
ಸು. 1160. ಬಸವಣ್ಣನವರ ಸಮಕಾಲೀನನಾದ ಒಬ್ಬ ವಚನಕಾರ. ದಸರೇಶ್ವರ ಎಂಬುದು ಈತನ ವಚನಾಂಕಿತ; ಚೆನ್ನದಸರೇಶ್ವರ ಎಂದೂ ಇದೆ ಎನ್ನುತ್ತಾರೆ. ಮಲ್ಲಿಕಾರ್ಜುನ ಪಂಡಿತಾರಾಧ್ಯ ಚರಿತೆಯಲ್ಲಿ ಈತನನ್ನು ದಸರಾರ್ಯ, ದಸರಿದೇವಯ್ಯ ಎಂದೂ ಕರೆಯಲಾಗಿದೆ.

	ಭೈರವೇಶ್ವರ ಕಥಾಮಣಿಸೂತ್ರ ರತ್ನಾಕರದಲ್ಲಿನ ಕಥೆಯ ಪ್ರಕಾರ ದಸರಯ್ಯ ಸತ್ಯವಾರಪುರದವ. ಸರ್ವಪ್ರಾಣಿಗಳಲ್ಲಿಯೂ ದಯೆಯುಳ್ಳವ, ಕ್ಷಮೆ, ದಮೆ, ಶಾಂತಿ, ಸದಾಚಾರ, ಸದ್ಭಕ್ತಿಗಳಿಂದ ಕೂಡಿದವ. ಗಿಡಮರಗಳಿಂದ ಹೂ ಕೊಯ್ದಾಗ, ಅವು ಅಳುವುದನ್ನೂ ಆ ಭಾಗಗಳಿಂದ ರಕ್ತ ಸುರಿಯುವುದನ್ನೂ ಕಂಡು ಪರಿತಪಿಸಿ ಈತ ಹೂ ಕೊಯ್ಯುವುದನ್ನೇ ನಿಲ್ಲಿಸಿ ಕೇವಲ ಕೆಳಗೆ ಉದುರಿದ ಹೂಗಳಿಂದ ಶಿವಾರ್ಚನೆ ಮಾಡುತ್ತಿದ್ದನಂತೆ. ಇಂಥ ಹಿರಿಯನಿಗೂ ಅಸೂಯಾಪರರಾದ ಕೆಲವರು ಮೋಟುಮಲ್ಲನೆಂಬ ಜಂಗಮವೇಷಿಯನ್ನು ಬಿಟ್ಟು ಮೋಟು ಕೈಗಳಿಂದಲೇ ಗುದ್ದಿಸಿದರು. ಇದರಿಂದ ಸ್ವಲ್ಪವೂ ಕೋಪಿಸದ ದಸರಯ್ಯ ಗುದ್ದಿದ ಕೈಗಳಿಗೆ ನೋವಾಯಿತೆಂದು ಪರಿತಪಿಸುವಲ್ಲಿ ಮೋಟನ ಕೈಗಳು ಚಿಗಿತು, ಆತ ಶಿವಭಕ್ತನಾದ. ನಂಜುಂಡದೇವನ ಭೈರವೇಶ್ವರ ಕಾವ್ಯದಲ್ಲೂ ಇದರ ಪ್ರಸ್ತಾಪವಿದೆ. 				                                 (ಎಸ್.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ